!--- MAIN ARTICLE BELOW -->
ವಾಪಾಸುಇಲ್ಲಿನ ಕನ್ನಡ ಛಂದಸ್ಸಿನ ಬಗೆಗೆಇಲ್ಲಿ ಬರೆದಿರುವುದು ಛಂದಸ್ಸಿನ ಬಗೆಗೆ ಮಾಹಿತಿಯಲ್ಲ (ಪ್ರತಿ ಛಂದಸ್ಸಿನ ಮಾಹಿತಿಗೆ ಇಲ್ಲಿ ಆ ಹೆಸರಿನ ಮೇಲೆ ಕ್ಲಿಕ್ಕಿಸಿದರೆ ಪಾಪ್‌ಅಪ್‌ನಲ್ಲಿ ವಿವರಗಳು ದೊರೆಯುತ್ತದೆ). ಬದಲಾಗಿ ಛಂದಸ್ಸು ಇಲ್ಲಿ ತೋರಿಸದ ಬಗೆಗೆ ಮತ್ತು ಛಂದಸ್ಸು ಗುರುತಿಸುವಲ್ಲಿ ನ ತೊಂದರೆಗಳ ಬಗೆಗೆ. ಛಂದಸ್ಸಿನ ಬಗೆಗೆ ಕನ್ನಡದಲ್ಲಿ ಸಾಫ್ಟವೇರ್ ಮೂಲಕ ಗುರುತಿಸುವ ಪ್ರಯತ್ನಗಳಲ್ಲಿ ನನಗೆ ಗಮನಕ್ಕೆ ಬಂದ ಎರಡು ಕವನ ತಂತ್ರಾಂಶ ಬ್ರಾಹ್ಮಿ ಅಕ್ಷರದವರದು https://brahmiakshara.com/ ಮತ್ತು >ಅನೂಪ್ ಶೆಟ್ಟಿಯವರದು https://chandassu.onrender.com/. ಬ್ರಾಹ್ಮಿ ಅಕ್ಷರವು ಕೇವಲ ಛಂದಸ್ಸಿಗೆ ಸೀಮಿತವಾಗಿಲ್ಲ. ಸಂಧಿ, ಅಲಂಕಾರ ಮುಂತಾದವೂ ಅಲ್ಲಿ ದೊರೆಯುತ್ತವೆ. ಅನೂಪ್ ಶೆಟ್ಟಿಯವರ ವೆಬ್‌ಸೈಟಿನಲ್ಲಿ ಅಭ್ಯಾಸಕ್ಕೂ ಎಡೆಮಾಡಿಕೊಡಲಾಗಿದೆ. ಇಲ್ಲಿ ಅಂಶಛಂದಸ್ಸು ಹೊರತು ಪಡಿಸಿ ಇತರ ಛಂದಸ್ಸು ಗುರುತಿಸ ಬಹುದು. ಶೆಟ್ಟಿಯವರದು ವೆಬ್ ಆಧಾರಿತವಾದ್ದರಿಂದ ಅದನ್ನು ಫೋನಿನಲ್ಲಿಯೂ (ಅಂಡ್ರಾಯ್ಡ್) ಬಳಸಬಹುದು. ಮಾತ್ರಾಗಣ, ಅಕ್ಕರ ಅಥವಾ ವರ್ಣ ಗಣ ಛಂದಸ್ಸು ನಿರ್ದಿಶ್ಟ ಅಕ್ಷರ ಅಥವಾ ಮಾತ್ರೆಗಳ ಸಂಖ್ಯೆಯ ಆಧಾರದ ಮೇಲೆ ಗಣಗಳು ಉಂಟಾಗುವುದರಿಂದ ಅವಕ್ಕೆ ಖಚಿತವಾದ ಗಣ ಲೆಕ್ಕ ಮಾಡಬಹುದು. ಇದು ಅಕ್ಕರಗಳ ಅಂಕೆ ಆಧಾರದ ಸಂಸ್ಕೃತ (ವೈದಿಕ) ಛಂದಸ್ಸಿಗೂ ನಿಜ. ಆದರೆ ಅಂಶಗಣ ಛಂದಸ್ಸಿನಲ್ಲಿ ಒದಕ್ಕಿಂತ ಹೆಚ್ಚು ಛಂದಸುಗಳು ಒಂದೇ ಪದ್ಯವನ್ನು ಪ್ರತಿನಿಧಿಸ ಬಹುದು ಮತ್ತು ಅವುಗಳ ಅಕ್ಷರ ಸಂಖ್ಯೆಯೂ ಹೆಚ್ಚು ಕಡಿಮೆಯಾಗುತ್ತದೆ. (ಕೆಲವೊಮ್ಮೆ ನಿರ್ದಿಶ್ಟ ಅಕ್ಷರ ಸಂಖ್ಯೆಗಳನ್ನೂ ಹೇಳಲಾಗಿದೆ, ಅದನ್ನು ಇಲ್ಲಿ ಗಣೆನೆಗೆ ತೆಗೆದುಕೊಂಡಿಲ್ಲ. ಬಳಸುವವರು ಅದನ್ನು ಬೇರೆಯಾಗಿ ಗಮನಿಸ ಬೇಕು. ಒಂದು ಛಂದಸ್ಸಿನ ಹಲವು ಆವೃತ್ತಿಗಳನ್ನು ವಿರಳವಾಗಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ. ಹೀಗಾಗಿ, ಇಲ್ಲಿ ಬಳಸಿದ ಆಕರಗಳ ಅಧ್ಯಯನಕ್ಕೆ ಇಲ್ಲಿಯ ಪುಟಗಳು ಬದಲೀ ಅಲ್ಲ, ಪೂರಕ ಮಾತ್ರ.) ಹೀಗಾಗಿ ಒಂದಕ್ಕೂ ಹೆಚ್ಚು ಸಾಧ್ಯತೆಗಳು ಇಲ್ಲಿ ದೊರೆಯುತ್ತವೆ. ಆದರೆ ಇದಶ್ಟೇ ಛಂದಸ್ಸಲ್ಲ. ಪ್ರಾಸ, ಯತಿ ಮುಂತಾದ ಹಲವು ಅಂಶಗಳೂ ಇದರ ಭಾಗ. ಹೀಗಾಗಿ ಇಲ್ಲಿ ಯತ್ನಿಸಿರುವುದು ಒಂದು ಛಂದಸ್ಸು ಪತ್ತೆಹ್ಚಚಲು ಸಹಾಯಕ ಮಾತ್ರ. ಮೇಲಿನ ಎರಡಕ್ಕೊಂದು ಸೇರ್ಪಡೆ. ಇಲ್ಲಿ ಅಂಶಗಣವನ್ನೂ ಗುರುತಿಸಲು ಸಹಾಯಕ. ಇನ್ನೊಂದು ಇಲ್ಲಿ ನೆನಪಿಟ್ಟುಕೊಳ್ಳುವುದು ಮಾತ್ರಾಗಣ, ವೃತ್ತಗಣ ಗಳಲ್ಲಿಯಾಗಲೀ ಅಥವಾ ಅಂಶಗಣದಲ್ಲಿಯಾಗಲೀ ಹಲವು ಸಲ ಹೆಚ್ಚುವರಿ ಲಘು/ಗುರು ಹೇಳಲಾಗುತ್ತದೆ. ಈ ಹೆಚ್ಚುವರಿಯನ್ನು ಮಿತಿಗೊಳಿಸಲಾಗಿದೆ ಆದರೆ ಅದರ, ಇರುವಿಕೆ, ಇಲ್ಲದಿರುವಿಕೆ ಆಯಾ ಛಂದಸ್ಸನ್ನು ಗುರುತಿಸುವಲ್ಲಿ ಅಡ್ಡಂಕಿಯಾಗುವುದಿಲ್ಲ. ಪಂಚಚಾಮರ ವೃತ್ತದಕ್ಕೆ ನಜಜರ ಅಕ್ಕರಗಳಲ್ಲದೆ ಮೇಲೊಂದು ಗುರು ಇರಬೇಕು ಎಂದು ಹೇಳಲಾಗಿದೆ. ವರ್‍ಣಗಣ "ನಜಜರ/ಗು", (ಕನ್ನಡ ಕೈಪಿಡಿ, ಸಂ. 1, 1988 (1936), ಮೈಸೂರು ವಿಶ್ವವಿದ್ಯಾನಿಲಯ, ಪು. 84) ಚಿದಂಬರಸ್ವರೂಪೆ ಚಿತ್ತ ಜನ್ಮವಂದ್ಯೆ ಚಿನ್ಮ/ಯೇ ಕೆಳಗಿನ ಸಾಲುಗಳಲ್ಲಿ ಕೊನೆಯ ಗುರು ತೆಗೆಯಲಾಗಿದೆ, ಹಾಗಿದ್ದಾಗ್ಯೂ ಇದು ಪಂಚಚಾಮರ ತೋರಿಸುತ್ತದೆ. ಚಿದಂಬರಸ್ವರೂಪೆ ಚಿತ್ತ ಜನ್ಮವಂದ್ಯೆ ಚಿನ್ಮ ಇದೇ ರೀತಿ ಮಾತ್ರಗಣದ ಷಟ್ಪದಿಗಳಲ್ಲಿ (ಅವುಗಳ ಮೂರು ಮತ್ತು ಆರನೆಯ ಪಾದ ಅಥವಾ ಸಾಲಿನಲ್ಲಿ) ಮತ್ತು ಅಂಶಗಣ ಛಂದಸ್ಸಿನಲ್ಲಿಯೂ ಸಹ. ಅಂಶಗಣ ಛಂದಸ್ಸಿನಲ್ಲಿ ಇದು ಹೆಚ್ಚುವರಿ ಬೇರೆ ಬೇರೆ ಛಂದಸ್ಸನ್ನೂ ತೋರಿಸ ಬಹುದು. ಆದರೆ ಅಂಶಗಣ ಛಂದಸ್ಸಿನಲ್ಲಿ ಇದರ ಹೊರತಾಗಿಯೂ ಕೆಲವು ಪದ್ಯಗಳು ಒಂದಕ್ಕೂ ಹೆಚ್ಚು ಅಂಶಗಣ ಛಂದಸ್ಸು ತೋರಿಸುತ್ತವೆ. ಕೆಳಗಿನ ಉದಾಹರಣೆಯನ್ನು ನೋಡಿ ಮೞೆಯಿಲ್ಲ ಬೆಳೆಯಿಲ್ಲ ಹೊೞೆಯಿಲ್ಲ ಕೆಱೆಯಿಲ್ಲ ಮೇಲಿನ ಸಾಲುಗಳ ಸಾಂಗತ್ಯಕ್ಕೆ (ವಿವಿವಿವಿ/ವಿವಿಬ್ರ) ಉದಾಹರಣೆಯಾಗಿ ಕೊಟ್ಟ ಸಾಲುಗಳು (ವೆಂಕಟಾಚಲ ಶಾಸ್ತ್ರಿ, 2018, ಪು 78) ಯಾವುದೇ ಉಳಿಕೆ (ಅಥವಾ ಹೆಚ್ಚುವರಿ) ಅಕ್ಕರಗಳಿಲ್ಲದೇ ಏಳೆಗೂ (ವಿವಿವಿವಿ/ವಿವಿಬ್ರ) ಹೊಂದುತ್ತದೆ. ಇದು ಇಲ್ಲಿ ಏಳೆಗೆ ಉದಾಹರಣೆಯಾಗಿ ಬಳಸಿದ ಪದ್ಯವೂ ಸಹ ಪೂರ್ತಿಯಾಗಿ ಸಾಂಗತ್ಯಕ್ಕೂ ಹೊಂದುತ್ತದೆ(ಅದೇ, ಪು 20). ಈಗ ತಾರ್ಕಿಕವಾಗಿಯೂ ಯೋಚಿಸಿ. ಕೆಳಗಿನ ಎರಡು ಸಾಲುಗಳು ಉತ್ಸಾಹ ಅಂಶಗಣಕ್ಕೆ ಸರಿ ಹೊಂದುತ್ತವೆ. ಹರಿಯ ಬಳನ ನಡುವೆ ಸೀತೆ ಪೊಳೆಯೆ ಚಳ ವಿಲೋಚನಂ ಎರಡೂ ಸಾಲುಗಳು ನಡುವಕ್ಕರ ತೋರಿಸುತ್ತವೆ ಸಹ ಹಾಗೂ ಎರಡನೆಯ ಸಾಲಿನಲ್ಲಿ ಒಂದು ಅಕ್ಕರ ಹೆಚ್ಚುವರಿ ಬರುತ್ತದೆ. ಹಾಗಾದರೆ ಮೊದಲ ಸಾಲನ್ನು ಎರಡು ಸಲ ಹಚ್ಚಿದರೆ? ಉತ್ಸಾಹ ಹಾಗೂ ನಡುವಕ್ಕರ (ಯಾವ ಹೆಚ್ಚುವರಿ ಅಕ್ಕರವೂ ಇಲ್ಲದೆ) ತೋರಿಸಲಾಗುತ್ತದೆ. ನೆನಪಿರಲಿ ಇಲ್ಲಿ ವೃತ್ತಗಣದಲ್ಲಿ ಹಾಗೂ ಅಂಶಗಣದ ಬಹುತೇಕ ಕಡೆ ಪೂರ್ತಿ ಪದ್ಯವನ್ನು ಚೆಕ್ ಮಾಡಲು ಅವಕಾಶವಿಲ್ಲ. ಅರ್ಧಸಮ (ಅಥವಾ 2 ಸಾಲಗಳು) ಹಚ್ಚಬಹುದು (ವೃತ್ತಗಣದಲ್ಲಿ ಒಂದು ಸಾಲನ್ನೂ ಬಳಸ ಬಹುದು). ಆದಿ ಪ್ರಾಸ ಮಾತ್ರ ಇಲ್ಲಿ ತೋರಿಸಲಾಗಿದೆ. ಆದರೆ ಅದು ಎಲ್ಲ ರೀತಿಯಲ್ಲಿಯೂ (ಸರ್ವ ಸಮಪರ್ಕವಾಗಿ) ಕೆಲಸ ಮಾಡುತ್ತದೆ ಎಂದು ಹೇಳಲಾರೆ. ಇಲ್ಲಿ ಚೆಕ್ ಮಾಡಬಹುದಾದ ಛಂದಸ್ಸುಗಳ (ವರ್ಗೀಕರಿಸಿದ) ಪಟ್ಟಿಯೊಂದು ಕೊಡಲಾಗಿದ್ದು ಹೆಸರಿನ ಮೇಲೆ ಕ್ಲಿಕ್ಕಿಸಿದರೆ ಆದರ ಬಗೆಗೆ ಮಾಹಿತಿ ಉದಾಹರಣೆ ಉಲ್ಲೇಖಗಳೊಂದಿಗೆ ಸಿಗುತ್ತದೆ. ಮಾತ್ರಾಗಣದ ಲೆಕ್ಕ (ಬ್ರಾಹ್ಮಿ ಅಕ್ಷರದ ಪ್ರಕಾರ) 28. ಇಲ್ಲಿ ಷಟ್ಪದಿ (7), ರಗಳೆ (3) ಮತ್ತು ಕಂದವನ್ನು (ಇದರಡಿ ಒಟ್ಟು 11 ಛಂದಸ್ಸುಗಳನ್ನು) ಮಾತ್ರ ತೋರಿಸಲಾಗಿದೆ.. ಅಕ್ಷರ /ವರ್ಣ ಗಣದಲ್ಲಿ 46 ಸಮವೃತ್ತಗಳನ್ನು ಮಾತ್ರ ಇಲ್ಲಿ ತೋರಿಸಲಾಗಿದೆ. ವೆಂಕಟಾಚಲ ಶಾಸ್ತ್ರಿಗಳು ವೃತ್ತಗಳ ಬಗೆಗೆ ಹೀಗೆ ಉಲ್ಲೇಖಿಸುತ್ತಾರೆ “ಒಂದೇ ಛಂದಸ್ಸಿಗೆ ಬೇರೆ ಬೇರೆ ಲೇಖಕರು ಬೇರೆ ಬೇರೆ ಹೆಸರುಗಳನ್ನು ಕೊಟ್ಟಿದ್ದಾರೆ; ಹಾಗೆಯೇ ಬೇರೆ ಬೇರೆ ಛಂದಸ್ಸುಗಳಿಗೆ ಬೇರೆ ಬೇರೆ ಲೇಖಕರು ಒಂದೇ ಹೆಸರು ಕೊಟ್ಟಿರುವುದೂ ಇದೆ.” (ವೆಂಕಟಾಚಲ ಶಾಸ್ತ್ರಿ, 2018, 93). ಈ ಬಗೆಗೆ ಆಸಕ್ತಿದಾಯಕ ವಿವರಗಳನ್ನು ಮಂಜುನಾಥನ್ ಜಿ. ಜಿ. “ಹಾಲಾಸ್ಯ ಪುರಾಣಂ” (ಪೀಠಿಕೆ, ಪು 71-84 ) ಅವರು ನೀಡುತ್ತಾರೆ. . ಇಲ್ಲಿ ಮಂಜುನಾಥನ್ ಅವರು ಚರ್ಚಿಸಿದ ಎಲ್ಲ ವೃತ್ತಗಳನ್ನೂ ತೋರಿಸಿಲ್ಲ. ಬದಲಾಗಿ ಕನ್ನಡ ಕೈಪಿಡಿ ಸಂಪುಟ-1 (ಸಂ. ಪುಟ್ಟಪ್ಪ ಕೆ ವಿ)ರ ಭಾಗ 2 ರಾಘವಾಚಾರ್ಯರು ಟಿ ಅವರ “ಕರ್ನಾಟಕ ಛಂದಸ್ಸು”ನಲ್ಲಿನ ಪಟ್ಟಿಯನ್ನೇ ಆಧಾರವಾಗಿಸಿಕೊಂಡಿದ್ದೇನೆ. ಅಲ್ಲಿಯ ಕೆಲವನ್ನು ಏಕೆ ಬಿಟ್ಟಿದ್ದೇನೆ ಎಂಬುದು ಮೇಲಿನ ಭಾಗ ಓದಿದವರಿಗೆ ವಿವರಿಸ ಬೇಕಿಲ್ಲ. ಇಲ್ಲಿ ಕಾಣಿಸಿಕೊಳ್ಳದ ಹಲವು ವೃತ್ತಗಳೂ ಇರಬಹುದು. ಬ್ರಾಹ್ಮಿ ಅಕ್ಷರ ವೆಬ್‌ಸೈಟಿನಲ್ಲಿ ಪಟ್ಟಿಮಾಡಿದ ಸಮವೃತ್ತಗಳು 180. ರಾಘವಾಚಾರ್ಯರು ಅಕ್ಕರಗಳ ಸಂಖ್ಯೆ ಆಧಾರದ ಮೇಲೆ 8 ಅಕ್ಷರಗಳಿಂದ 26 ಅಕ್ಕರಗಳಿರುವ (ಅತ್ಯುಕ್ತಿಯಿಂದ -ಉತ್ಕೃತಿ ವರೆಗೆ, ಹೀಗಾಗಿ ಇಲ್ಲಿಯ ವೃತ್ತಗಳ ಗರಿಶ್ಟ ಗಣಗಳು 8) ಪದ್ಯದ ಪಾದಗಳ ಆಧಾರದಲ್ಲಿ (ಕೆಲವನ್ನು ಬಿಟ್ಟು, ಹಲವದರಲ್ಲಿ ಒಂದಕ್ಕೂ ಹೆಚ್ಚು) ವೃತ್ತಗಳ ಲಕ್ಷಣಗಳನ್ನು ಚರ್ಚಿಸುತ್ತಾರೆ. 8 ಅಕ್ಷರಗಳು (ಯಮತರಜಭನಸ), ಕನಿಶ್ಟ ಮೂರು ಮತ್ತು ಗರಿಶ್ಟ ಎಂಟು ಗಣಗಳು ಇರುವುದಾದರೆ ಸಾಧ್ಯ ವೃತ್ತಗಳು 12,825 (chatbot.com ಅಥಾವ ಎಆಯ್/ ಕೃತಕ ಬುದ್ಧಿಮತ್ತೆಯ ಉತ್ತರ). ಸಂಸ್ಕೃತ ಛಂದಸ್ಸುನ್ನು ವೈದಿಕ ಛಂದಸ್ಸು ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ (ವರ್ಣಗಳ ಛಂದಸ್ಸುನ್ನು ಸಂಸ್ಕೃತ ಛಂದಸ್ಸು ಎಂದು). ಆದರೆ ಇಲ್ಲಿ ಅಕ್ಕರ ಗಣ ಛಂದಸ್ಸು ಎಂದು ಬಳಸಿದ ಕಾರಣಕ್ಕೆ ವೈದಿಕ ಛಂದಸ್ಸನ್ನು ಸಂಸ್ಕೃತ ಛಂದಸ್ಸು ಎಂದು ಕರೆದಿದ್ದೇನೆ. ಇಲ್ಲಿ ಚೆಕ್ ಮಾಡಲು ಅವಕಾಶ ಇರುವ ಛಂದಸ್ಸುಗಳು ಗಾಯತ್ರಿ, ಶ್ಲೋಕ ಮತ್ತು ತ್ರಿಷ್ಟುಬ್ ಮಾತ್ರ. ಅಲ್ಲಿ ಗಾಯತ್ರಿ ಮತ್ತು ಶ್ಲೋಕಗಳಲ್ಲಿ ಲಗುದ್ವಯ (u-u-) ಇಲ್ಲದಿದ್ದರೆ ಅಥವಾ ಅನುಷ್ಟುಬ್‌ಗೆ ಕೊನೆಗೆ ಯಗಣ (u--) ಇಲ್ಲದಿದ್ದರೆ ಮಾಹಿತಿ ದೊರೆಯುತ್ತದೆ. ಕನ್ನಡ ಲಿಪಿಯಲ್ಲಿನ ಸಂಸ್ಕೃತ ಕೃತಿಗಳಿಗೆ ಸಹಾಯಕವಾಗಲೆಂದು ಇವನ್ನು ಸೇರಿಸಿದ್ದೇನೆ. ಈ ಕೃತಿಗಳಲ್ಲಿ ಈ ಛಂದಸ್ಸುಗಳಲ್ಲದೆ ವೃತ್ತ ಛಂದಸ್ಸುಗಳೂ ಕಂಡು ಬರುತ್ತವೆ. ಕಲಬುರ್ಗಿ “ಮದನವತಿ ಮತ್ತು ಛಂದೋವಸಂತಗಳು ಕೇವಲ ಛಂದೋಗ್ರಂಥಗಳಲ್ಲಿ ಜೀವಹಿಡಿದು ಕುಳಿತರೆ ಮಿಕ್ಕ ಅಕ್ಕರಿಕೆ, ಅಕ್ಕರ, ಗೀತಿಕೆ, ಏಳೆ, ಚೌಪದಿ, ಉತ್ಸಾಹಗಳು ಒಂದು ಹೆಜ್ಜೆ ಮುಂದೆ ಹೋಗಿ ಕವಿಗಳ ಹಸ್ತ ಹಬ್ಬಿ ನಿಲ್ಲುವ ವಿಫಲ ಸಾಹಸ ತೋರಿದವು” ಎನ್ನುತ್ತಾರೆ ತಮ್ಮ “ಶಾಸನದಲ್ಲಿ ಭಾಮಿನಿ” ಲೇಖನದಲ್ಲಿ (ಪು 174, ಸಂ. ರಂವೀದ್ರನಾಥ ಕೆ, 2020, ಡಾ ಎಂ. ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ, ಸಂಪುಟ 33, ವಚನಪಿತಾಮಹ ಡಾ. ಫ. ಗು, ಹಳಕಟ್ಟಿ ಸಂಶೋದನ ಕೇಂದ್ರ, ವಿಜಯಪುರ) ಅಂಶಗಣ ಹಲವು ಕಾರಣಗಳಿಗೆ ಒಂದು ಸವಾಲು (ನನ್ನಂತಹ ಹವ್ಯಾಸಿಗೆ ಖಂಡಿತ). ಈಗಲೂ ಎಲ್ಲವೂ ಸರಿಯಾಗಿಯೇ ಬರುತ್ತದೆ ಎಂದು ತಿಳಿಯದು. “ಪ್ರತಿಲಿಪಿ”ಯ ಶಂಕರಾನಂದ ಹೆಬ್ಬಾಳ ರಂತಹ ಹಲವು ಲೇಖಕರ ಪದ್ಯಗಳು ಚೆಕ್ ಮಾಡುವಲ್ಲಿನ ಉಪಯುಕ್ತ. ಅಂಶಗಣದ ಕ್ಲಾಸಿಕ್ ಪಠ್ಯಗಳಲ್ಲಿ ಉದಾಹರಣೆಗಳು ಸಿಗುವುದು ಕಡಿಮೆ. ಕೆಲವು ಸಲ ತಪ್ಪಾಗಿರಲೂ ಬಹುದು. ಇವರ ಪದ್ಯಗಳ ಸಾಲುಗಳು ನನಗೆ ಸರಿಯಿದೆಯೇ ಎಂದು ನೋಡಲು ಅವಕಾಶ ಮಾಡಿಕೊಡುತ್ತದೆ (ಹಲವು ಸಾಧ್ಯತೆಗಳ ಹಿನ್ನೆಲೆಯಲ್ಲಿ). ಹೀಗಾಗಿ, ಇವರನ್ನು ವಿಸೇಶವಾಗಿ ನೆನೆಯ ಬಯಸುತ್ತೇನೆ. ಐತಿಹಾಸಿಕ ಪಠ್ಯಗಳನ್ನು ಸಂಪಾದಿಸಲು ಈ ಮತ್ತು ಮೇಲೆ ಹೇಳಿದ ಇತರ ಇಂತಹುದೇ ಛಂದಸ್ಸಿನ ಗುರುತಿಸು ಪ್ರಯತ್ನಗಳನ್ನು ಬಳಸ ಬಹುದು ಎಂದು ನನ್ನ ಅನಿಸಿಕೆ. ಹಾಗಲ್ಲದಿದ್ದರೂ ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಗೆ ತುಸು ಸಹಾಯಕವಾದರೂ ಸಾಕಲ್ಲವೇ?. |
ಟಿಪ್ಪಣಿಗಳು |