checking data baseConnected successfully! Sample Image
  •  

ವಚನ ಆಕರಗಳು (15ನೆ ಶತಮಾನ)

search:
search:
ಪುಣ್ಯವುಳ್ಳ ಕಾಲಕ್ಕೆ ಮಣ್ಣು ಹೊನ್ನಪ್ಪುದು,
ಪುಣ್ಯವುಳ್ಳ ಕಾಲಕ್ಕೆ ಪಾಷಾಣ ಪರುಷವಪ್ಪುದು ನೋಡಾ.
ಮುನ್ನ ಮುನ್ನವೆ,
ಅಚ್ಚೊತ್ತಿದ ಭಾಗ್ಯ ಎನ್ನ ಕಣ್ಣ ಮುಂದೆ ಕಾಣಬಂದಿತ್ತು ನೋಡಾ!
ಮಣ್ಣ ಮರೆಯ ದೇಗುಲದೊಳಗೊಂದು ಮಾಣಿಕ್ಯವ ಕಂಡಬಳಿಕ,
ಇನ್ನು ಮುನ್ನಿನಂತಪ್ಪುದೆ ಗುಹೇಶ್ವರಾ?
1351.02 341
C30
ಅಲ್ಲಮ ಗುಹೇಶ್ವರಾ
ಆಕರ ಗ್ರಂಥಗಳು
ಮಹದೇವಯ್ಯನ ಶೂನ್ಯಸಂಪಾದನೆ 32
ಅರಸುವ ಬಳ್ಳಿ ಕಾಲ ಸುತ್ತಿತ್ತೆಂಬಂತೆ,
ಬಯಸುವ ಬಯಕೆ ಕೈಸಾರಿದಂತೆ,
ಬಡವ ನಿಧಾನವನೆಡಹಿ ಕಂಡಂತೆ,
ನಾನರಸುತ್ತಲರಸುತ್ತ ಬಂದು
ಭಾವಕ್ಕಗಮ್ಯವಾದ ಮೂರ್ತಿಯ ಕಂಡೆ ನೋಡಾ.
ಎನ್ನ ಅರಿವಿನ ಹರುಹ ಕಂಡೆ ನೋಡಾ.
ಎನ್ನ ಒಳಹೊರಗೆ ಎಡೆದೆರಹಿಲ್ಲದೆ ಥಳಥಳಿಸಿ ಬೆಳಗಿ ಹೊಳೆವುತಿಪ್ಪ
ಅಖಂಡಜ್ಯೋತಿಯ ಕಂಡೆ ನೋಡಾ !
ಕರುಹಳಿದ ಕರಸ್ಥಲದ ನಿಬ್ಬೆರಗಿನ ನೋಟದ
ಎನ್ನ ಪರಮಗುರುವ ಕಂಡು ಬದುಕಿದೆನು ಕಾಣಾ ಗುಹೇಶ್ವರ
821.02 342
C31
ಅಲ್ಲಮ ಗುಹೇಶ್ವರ
ಆಕರ ಗ್ರಂಥಗಳು
ಮಹದೇವಯ್ಯನ ಶೂನ್ಯಸಂಪಾದನೆ 33
ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ ಹಿಡಿದಿಹೆನೆಂದಡೆ,
ಸಿಕ್ಕದೆಂಬ ಬಳಲಿಕೆಯ ನೋಡಾ.
ಕಂಡುದನೆ ಕಂಡು ಗುರುಪಾದವಿಡಿದಲ್ಲಿ,
ಕಾಣಬಾರದುದ ಕಾಣಬಹುದು ಗುಹೇಶ್ವರಾ.
51.02 343
C32
ಅಲ್ಲಮ ಗುಹೇಶ್ವರಾ
ಆಕರ ಗ್ರಂಥಗಳು
ಮಹದೇವಯ್ಯನ ಶೂನ್ಯಸಂಪಾದನೆ 34
ಕಾಯದಲಾದ ಮೂರ್ತಿಯಲ್ಲ, ಜೀವದಲಾದ ಮೂರ್ತಿಯಲ್ಲ,
ಪ್ರಾಣದಲಾದ ಮೂರ್ತಿಯಲ್ಲ, ಪುಣ್ಯದಲಾದ ಮೂರ್ತಿಯಲ್ಲ,
ಮುಕ್ತಿಯಲಾದ ಮೂರ್ತಿಯಲ್ಲ,
ಯುಗದಲಾದ ಮೂರ್ತಿಯಲ್ಲ, ಜುಗದಲಾದ ಮೂರ್ತಿಯಲ್ಲ,
ಇದೆಂತಹ ಮೂರ್ತಿಯೆಂದುಪಮಿಸುವೆ?
ಕಾಣಬಾರದ ಕಾಯ ನೋಡಬಾರದ ತೇಜ,
ಉಪಮಿಸಬಾರದ ನಿಲವು.
ಕಾರಣವಿಡಿದು ಕಣ್ಗೆ ಗೋಚರವಾದ ಸುಖವನು
ಏನೆಂದು ಹೇಳುವೆ ಗುಹೇಶ್ವರಾ?
1095.02 344
C33
ಅಲ್ಲಮ ಗುಹೇಶ್ವರಾ
ಆಕರ ಗ್ರಂಥಗಳು
ಮಹದೇವಯ್ಯನ ಶೂನ್ಯಸಂಪಾದನೆ 35
ಸ್ಫಟಿಕದ ಘಟದಂತೆ ಒಳಹೊರಗಿಲ್ಲ ನೋಡಾ !
ವಿಗಡಚರಿತ್ರಕ್ಕೆ ಬೆರಗಾದೆನು.
ನೋಡುವಡೆ ಕಾಣಬರುತ್ತಿದೆ, ಮುಟ್ಟುವಡೆ ಕೈಗೆ ಸಿಲುಕದು
ಹೊದ್ದುವಡೆ ಸಮೀಪ, ಸಾರಿದಡೆ ಅತ್ತತ್ತ ತೋರುತ್ತಿದೆ.
ಆಕಾರ ನಿರಾಕಾರವ ನುಂಗಿ
ಬಯಲ ಸಮಾಧಿಯಲ್ಲಿ ಸಿಲುಕಿತ್ತು ನೋಡಾ !
ದರ್ಶನದಿಂದ ಅಮೃತಾಹಾರವಾಯಿತ್ತು,
ಬೆರಸಿದಡೆ ಇನ್ನೆಂತೊ ಗುಹೇಶ್ವರಾ!
1596.02 345
C34
ಅಲ್ಲಮ ಗುಹೇಶ್ವರಾ
ಆಕರ ಗ್ರಂಥಗಳು
ಮಹದೇವಯ್ಯನ ಶೂನ್ಯಸಂಪಾದನೆ 36
ನಡೆ ನುಡಿಯಿಲ್ಲದ ಗುರುವ ಕಂಡು
ಉಪದೇಶವ ಪಡೆಯಲೆಂದು ಹೋದಡೆ;
ಒಡನೆ ನುಡಿಯನು ನುಡಿಸಿದಡೆ ಕೇಳನು.
ಕಡೆ ಮೊದಲ ಕಾರ್ಯ ಎಂತಪ್ಪುದೊ ಅಯ್ಯಾ?
ಮೂಗರ ಮೂಗರ ಪ್ರಸಂಗದಂತೆ ಇದೆ
ಎನ್ನೊಳಗೆ ಅರಿವಿನ ಪರಿಮಳ!
ಹೊರಗೆ ನೋಡಿದಡೆ ಮುಗ್ಧವಾಯಿತ್ತು.
ಇದನೆಂತು ಉಪಮಿಸುವೆ ಅನಿಯಮದ ಬೆಡಗ?
ಇದು ತನ್ನಿಂದ ತಾನಪ್ಪುದಲ್ಲದೆ, ಭಿನ್ನದಲುಂಟೆ ಗುಹೇಶ್ವರಾ?
1279.02 346
C35
ಅಲ್ಲಮ ಗುಹೇಶ್ವರಾ
ಆಕರ ಗ್ರಂಥಗಳು
ಮಹದೇವಯ್ಯನ ಶೂನ್ಯಸಂಪಾದನೆ 37
ಒಂದೆಂಬೆನೆ? ಎರಡಾಗಿದೆ; ಎರಡೆಂಬೆನೆ? ಒಂದಾಗಿದೆ.
ಒಂದೆರಡೆಂಬ ಸಂದೇಹವಿದೇನೊ?
ಅಗಲಲಿಲ್ಲದ ಕೂಟಕ್ಕೆ ಬಿಚ್ಚಿ ಬೇರಾಗದ ಉಪದೇಶ!
ಗುರು ಶಿಷ್ಯರೆಂಬ ಭಾವಕ್ಕೆ ಭೇದವುಂಟೆ ಗುಹೇಶ್ವರಾ?
1014.02 347
C36
ಅಲ್ಲಮ ಗುಹೇಶ್ವರಾ
ಆಕರ ಗ್ರಂಥಗಳು
ಮಹದೇವಯ್ಯನ ಶೂನ್ಯಸಂಪಾದನೆ 38
ಕಾಣಬಾರದ ಗುರು ಕಣ್ಗೆ ಗೋಚರವಾದಡೆ;_
ಹೇಳಲಿಲ್ಲದ ಬಿನ್ನಪ್ಪ, ಮುಟ್ಟಲಿಲ್ಲದ ಹಸ್ತಮಸ್ತಕಸಂಯೋಗ.
ಹೂಸಲಿಲ್ಲದ ವಿಭೂತಿಯ ಪಟ್ಟ, ಕೇಳಲಿಲ್ಲದ ಕರ್ಣಮಂತ್ರ.
ತುಂಬಿ ತುಳುಕದ ಕಲಶಾಭಿಷೇಕ ಆಗಮವಿಲ್ಲದ ದೀಕ್ಷೆ,
ಪೂಜೆಗೆ ಬಾರದ ಲಿಂಗ, ಸಂಗವಿಲ್ಲದ ಸಂಬಂಧ.
ಸ್ವಯವಪ್ಪ ಅನುಗ್ರಹ,
ಅನುಗೊಂಬಂತೆ ಮಾಡಾ ಗುಹೇಶ್ವರಾ.
1074.02 348
C37
ಅಲ್ಲಮ ಗುಹೇಶ್ವರಾ
ಆಕರ ಗ್ರಂಥಗಳು
ಮಹದೇವಯ್ಯನ ಶೂನ್ಯಸಂಪಾದನೆ 39
ಅಯ್ಯಾ ನೀನೆನಗೆ ಗುರುವಪ್ಪಡೆ, ನಾ ನಿನಗೆ ಶಿಷ್ಯನಪ್ಪಡೆ,
ಎನ್ನ ಕರಣಾದಿ ಗುಣಂಗಳ ಕಳೆದು,
ಎನ್ನ ಕಾಯದ ಕರ್ಮವ ತೊಡೆದು,
ಎನ್ನ ಪ್ರಾಣನ ಧರ್ಮವ ನಿಲಿಸಿ,
ನೀನೆನ್ನ ಕಾಯದಲಡಗಿ, ನೀನೆನ್ನ ಪ್ರಾಣದಲಡಗಿ
ನೀನೆನ್ನ ಭಾವದಲಡಗಿ, ನೀನೆನ್ನ ಕರಸ್ಥಲಕ್ಕೆ ಬಂದು
ಕಾರುಣ್ಯವ ಮಾಡಾ ಗುಹೇಶ್ವರಾ
53.02 349
C38
ಅಲ್ಲಮ ಗುಹೇಶ್ವರಾ
ಆಕರ ಗ್ರಂಥಗಳು
ಮಹದೇವಯ್ಯನ ಶೂನ್ಯಸಂಪಾದನೆ 40
ಆದಿಯಿಂದತ್ತತ್ತಲೆನಗೆ ನೀನೆ ಗುರುವಯ್ಯಾ.
ಅನಾದಿಯಿಂದತ್ತತ್ತಲೆನಗೆ ನೀನೆ ಗುರುವಯ್ಯಾ.
ಈ ಎರಡು ನಾಮ ಹುಟ್ಟದ ಮುನ್ನ
ನಿಮಗೆ ನಾನು ಶಿಷ್ಯನಯ್ಯಾ.
ಎನ್ನ ಭಾವಕಾಯದೊಳಗಣ ಭ್ರಮೆಯ ಕಳೆದು,
ಎನ್ನ ಜ್ಞಾನಕಾಯದೊಳಗಣ ಮರಹ ಕಳೆದು,
ಎನ್ನೊಳಗೆ ತಿಳಿವಿನ ಬಗೆಯ ತೋರುತ್ತ,
ಹೊರಗೆ ನುಡಿಯದಂತಿರ್ದಡೆ ಬಿಡೆನು ನೋಡಾ ನಿಮ್ಮ ಶ್ರೀಚರಣವನು.
ಮಾಡಿದಡೆ ಅಂತು ಮಹಾಪ್ರಸಾದವೆಂದು ಕೈಕೊಂಬೆ.
ಮಾಡದಿರ್ದಡೆ ನೀವೆ ನಾನಾಗಿ ಮಹಾಪ್ರಸಾದವೆಂದು ಕೈಕೊಂಬೆನು,
ಇಂತು ಆವತೆರದಿಂದಲಾದಡೂ
ಎನ್ನೊಡಲ ನಿಮ್ಮಲ್ಲಿ ಸವೆದು ಪಡೆವೆನು ನಿಮ್ಮ ಕರುಣವ
ಗುಹೇಶ್ವರಾ ಎನ್ನ ಇರವಿನ ಪರಿ ಇಂತುಟು ನೋಡಾ
897.02 350
C39
ಅಲ್ಲಮ ಗುಹೇಶ್ವರಾ
ಆಕರ ಗ್ರಂಥಗಳು
ಮಹದೇವಯ್ಯನ ಶೂನ್ಯಸಂಪಾದನೆ 41

ಟಿಪ್ಪಣಿ; * ಪುಟ ಸಂಖ್ಯೆವಚನ ಸಂಖ್ಯೆ

[ಮೊದಲ ಪುಟ]  « ಹಿಂದಿನ 1031323334353637383940ಮುಂದಿನ 10 » [ಕೊನೆ ಪುಟ]


ಸಿಕ್ಕ ಪಲಿತಾಂಶಗಳು 427 ಇದು ಪುಟ 35 ಈ ಪುಟದಲ್ಲಿ ಪಲಿತಾಂಶಗಳು 341 ರಿಂದ 350 ವರೆಗೆ