checking data baseConnected successfully! Sample Image
  •  

ವಚನ ಆಕರಗಳು (15ನೆ ಶತಮಾನ)

search:
search:
ನಿಜವನರಿಯದ ನಿಶ್ಚಿಂತನೆ, ಮರಣವ ಗೆಲಿದ ಮಹಂತನೆ, ಘನವ ಕಂಡ ಮಹಿಮನೆ, ವರವನೊಳಕೊಂಡ ಪರಿಣಾಮಿಯೆ, ಬಯಲಲೊದಗಿದ ಭರಿತನೆ, ಗುಹೇಶ್ವರಲಿಂಗನಿರಾಳವನೊಳಕೊಂಡ ಸಹಜನೆ! 637.02 381
C70
ಅಲ್ಲಮ ಗುಹೇಶ್ವರ
ಆಕರ ಗ್ರಂಥಗಳು
ಮಹದೇವಯ್ಯನ ಶೂನ್ಯಸಂಪಾದನೆ 73
ಜ್ಞಾನಚಕ್ರ:
ಪರಮ ತತ್ವ ಪರಮಜ್ಞಾನ ಪರಮಾರ್ಥ ಪರಾಪರ
ವಾಙ್ಮನಕ್ಕಗೋಚರ ಶಬ್ದಗಂಭೀರ ಉಪಮಾತೀತ, ಉನ್ನತ ಪರಶಿವ,
ಜ್ಞಾನಜ್ಯೋತಿ ಸುಜ್ಞಾನದ ಪ್ರಭೆಯ ಬೆಳಗಿನೊಳಗೆ ಸುಳಿದಾಡುವ
ಪರಮಾನಂದದ ಮಹಾಮಹಿಮಂಗೆ,
ಶಿವಜ್ಞಾನವೆ ಶೃಂಗಾರ, ಮಹಾಬೆಳಗೆ ವಿಭೂತಿ, ಪಂಚಬ್ರಹ್ಮವೆ ದರ್ಶನ
ಗಗನಸ್ಥಾನವೆ ಕಂಥೆ, ಆಕಾಶವೆ ಟೊಪ್ಪರ,
ಅಜಾಂಡ_ಬ್ರಹ್ಮಾಂಡವೆ ಕರ್ಣಕುಂಡಲ,
ಆದಿ ಆಧಾರವೆ ಕಕ್ಷಪಾಳ ಅನಾಹತವೆ ಒಡ್ಯಾಣ, ಅದ್ವೈತವೆ ಯೋಗವಟ್ಟಿಗೆ,
ಅಗಮ್ಯವೆ ಯೋಗವಾವುಗೆ, ಅಚಳಿತವೆ ಖರ್ಪರ, ಅಪ್ರಾಮಣವೆ ಲಾಕುಳ,
ಅವಿಚಾರವೆ ಸುಳುಹು, ಅಕಲ್ಪಿತವೆ ಭಿಕ್ಷೆ, ಕೊಂಡುದೆ ಗಮನ, ನಿಂದುದೆ ನಿವಾಸ,_
ನಿಶ್ಚಿಂತವೆಂಬ ಆಶ್ರಮದಲ್ಲಿ ನಿರಾಕುಳವೆಂಬ ಸಿಂಹಾಸನವನಿಕ್ಕಿ;
ಗಗನಗಂಭೀರದ ಬಾವಿಯೊಳಗೆ ಅಗೋಚರದ ಅಗ್ಘಣಿಯ ತಂದು
ಮಹಾಘನಪ್ರಾಣಲಿಂಗಕ್ಕೆ ಮಂಗಳದ ಬೆಳಗಿನಲ್ಲಿ ಮಜ್ಜನಕ್ಕೆರೆದು;
ಬಿಂದ್ವಾಕಾಶವೆ ಗಂಧ, ಮಹದಾಕಾಶವೆ ಅಕ್ಷತೆ, ಪರಾಪರವೆ ಪತ್ರೆಪುಷ್ಪ,
ನಿರ್ಮಳವೆ ಲಿಂಗಾರ್ಚನೆ, ಮಹಾಪ್ರಕಾಶವೆ ಪೂಜೆ,
ನಿತ್ಯನಿರಂಜನವೆ ಧೂಪದೀಪಾರತಿ,
ಸಕಲ ಭುವನಾದಿಭುವನಂಗಳೆ ಸಯದಾನ, ಆಚಾರವೆ ಅರ್ಪಿತ, ಮಹತ್ವವೆ ಸಿತಾಳ,
ಅಖಂಡಿತವೆ ಅಡಕೆ, ಏಕೋಭಾವವೆ ಎಲೆ, ಶುದ್ಧಶಿವಾಚಾರವೆ ಸುಣ್ಣ_
ವಿವೇಕ ವಿಚಾರದಿಂದ ವೀಳೆಯವನವಧರಿಸೂದು.
ಮಹಾಲಿಂಗದ ಪರಿಣಾಮವೆ ಪ್ರಸಾದ, ಸಮ್ಯಕ್ ಜ್ಞಾನವೆ ಸಂತೋಷ.
ಸಹಜ ನಿರಾಭಾರಿಗಳ ಮೇಳದಿಂದ, ನಿಸ್ಸೀಮದ ನಿಭ್ರಾಂತಿನ ಸುಸಂಗದಲ್ಲಿ_
ನಿರಾಶಾಪದವೆ ಅನುಕೂಲ, ನಿಶ್ಶಬ್ದವೆ ಅನುಭಾವ,
ಅನುಪಮದ ನಿಶ್ಶೂನ್ಯವೆ ವಿಶ್ರಾಮ, ನಿರಾಕಾರವೆ ಗಮನ.
ನಿರಂತರ ಪಾತಾಳ ಊಧ್ರ್ವದ ಪವನ;_ತ್ರಿಭುವನಗಿರಿಯೆಂಬ ಪರ್ವತವನೇರಿ,
ಕಾಯವೆಂಬ ಕದಳಿಯ ಹೊಕ್ಕು ಸುಳಿದಾಡುವ
ಪರಮಾನಂದದ ಮಹಾಮಹಿಮಂಗೆ;
ಇಹಲೋಕವೇನು? ಪರಲೋಕವೇನು?
ಅಲ್ಲಿಂದತ್ತ ಆಗಮ್ಯ ನಿರಾಳ ಪರಮಜ್ಞಾನದ ಸಿದ್ಧಿ ಮಹಾಲಿಂಗದ ಬೆಳಗು,
ಗುಹೇಶ್ವರಾ, ನಿಮ್ಮ ನಿಜವನರಿದ ಮಹಾಮಹಿಮ ಶರಣಂಗೆ,
ನಮೋ ನಮೋ ಎಂಬೆನು.
374.02 382
C71
ಅಲ್ಲಮ ಗುಹೇಶ್ವರಾ
ಆಕರ ಗ್ರಂಥಗಳು
ಮಹದೇವಯ್ಯನ ಶೂನ್ಯಸಂಪಾದನೆ 74
ಕಾಲಿಲ್ಲದ ಗಮನ, ಕೈಯಿಲ್ಲದ ಸೋಂಕು, ಬಾಯಿಲ್ಲದ ರುಚಿ,
ಭಾವವೆ ಕರ್ಪರವಾಗಿ «ಪರಮ ದೇಹಿ» ಎಂದು ಬೇಡುವ
ಪರಮನ ತೋರಯ್ಯಾ ಗುಹೇಶ್ವರಾ.
449.02 383
C72
ಅಲ್ಲಮ ಗುಹೇಶ್ವರಾ
ಆಕರ ಗ್ರಂಥಗಳು
ಮಹದೇವಯ್ಯನ ಶೂನ್ಯಸಂಪಾದನೆ 75
ಕಣ್ಣೆ ಕಟ್ಟಿಗೆಯಾಗಿ, ಕೈಯೆ ಕರ್ಪರವಾಗಿ ,
ಕಿವಿಯೆ ಸಕಲಪುರಾತನರ ಕಾರುಣ್ಯವೆನುತ,
ಮನದ ಭಿಕ್ಷವನುಂಡು, ತನು ಪರಿಣಾಮವನೆಯ್ದಿಹ
ಘನಮಹಿಮರ ತೋರಯ್ಯಾ ಗುಹೇಶ್ವರಾ
450.02 384
C73
ಅಲ್ಲಮ ಗುಹೇಶ್ವರಾ
ಆಕರ ಗ್ರಂಥಗಳು
ಮಹದೇವಯ್ಯನ ಶೂನ್ಯಸಂಪಾದನೆ 76
ಕಂಡುದೆಲ್ಲ ಪಾವನ ಕೇಳಿತ್ತೆಲ್ಲ ಪರಮಬೋಧೆ,
ಮುಟ್ಟಿತ್ತೆಲ್ಲ ಪರುಷದ ಸೋಂಕು
ಒಡನೆ ನುಡಿದವರೆಲ್ಲ ಸದ್ಯೋನ್ಮುಕ್ತರು.
ಸುಳಿದ ಸುಳುಹೆಲ್ಲ ಜಗತ್ಪಾವನ, ಮೆಟ್ಟಿದ ಧರೆಯೆಲ್ಲ ಅವಿಮುಕ್ತಕ್ಷೇತ್ರ,
ಸೋಂಕಿದ ಜಲವೆಲ್ಲ ಪುಣ್ಯತೀರ್ಥಂಗಳು.
ಶರಣೆಂದು ಭಕ್ತಿಯ ಮಾಡಿದವರೆಲ್ಲರು ಸಾಯುಜ್ಯರು.
ಗುಹೇಶ್ವರಾ ನಿಮ್ಮ ಸುಳುಹಿನ ಸೊಗಸನುಪಮಿಸಬಾರದು.
1037.02 385
C74
ಅಲ್ಲಮ ಗುಹೇಶ್ವರಾ
ಆಕರ ಗ್ರಂಥಗಳು
ಮಹದೇವಯ್ಯನ ಶೂನ್ಯಸಂಪಾದನೆ 77
ಅರಿವನಣಲೊಳಗಿಕ್ಕಿ ಅಗಿವುತ್ತಿದೆ ಮರ್ತ್ಯಲೋಕವೆಲ್ಲವು.
ಅರಿವು ಉಳಿಯಲರಿಯದೆ ಕೆಟ್ಟಿತ್ತು ಲೋಕವೆಲ್ಲವು.
ನಾನೆಂತು ಬದುಕುವೆನಣ್ಣಾ ?
ಕತ್ತಲೆ ಬೆಳಗ ಕಾಂಬ ಸಂದೇಹಿ ನಾನೊಬ್ಬಳು.
ಎನ್ನ ಕಣ್ಣ ಕಟ್ಟಿ ಕನ್ನಡಿಯ ತೋರಿತ್ತೊ ಅಜಗಣ್ಣಾ ನಿನ್ನ ಯೋಗ!
1099.05 386
C75
ಮುಕ್ತಾಯಕ್ಕ ಅಜಗಣ್ಣಾ
ಆಕರ ಗ್ರಂಥಗಳು
ಮಹದೇವಯ್ಯನ ಶೂನ್ಯಸಂಪಾದನೆ 78
ಸ್ಫಟಿಕಪ್ರಜ್ವಲಜ್ಯೋತಿ ಘಟದೊಳಗೆ ತೋರುತ್ತಿರೆ,
ದಿಟಪುಟವನತಿಗಳೆದು ಸಟೆಯ ಬಳಸುವರೆ?
ಅಂತರಂಗದ ಶುದ್ಭಿಯ ಬಹಿರಂಗಕ್ಕೆ ತಂದು
ಸಂತೈಸಲರಿಯದೆ ಮರುಳಾದಿರಣ್ಣಾ ?
ಜಂತ್ರದ ಕೀಲಕೂಟದ ಸಂಚದ ಭೇದವು ತಪ್ಪಿ,
ಮಂತ್ರಭಿನ್ನವಾಗಿ ನುಡಿವರೆ ಅಜಗಣ್ಣಾ ?
1132.05 387
C76
ಮುಕ್ತಾಯಕ್ಕ ಅಜಗಣ್ಣಾ
ಆಕರ ಗ್ರಂಥಗಳು
ಮಹದೇವಯ್ಯನ ಶೂನ್ಯಸಂಪಾದನೆ 79
ಅಂಧಕನ ಕೈಯ ಅಂಧಕ ಹಿಡಿದಂತಿರಬೇಕು.
ಮೂಗನ ಕೈಯಲ್ಲಿ ಕಾವ್ಯವ ಕೇಳಿದಂತಿರಬೇಕು.
ದರ್ಪಣದೊಳಗಣ ಪ್ರತಿಬಿಂಬದಂತೆ
ಹಿಡಿವರಿಗಳವಲ್ಲದಿರಬೇಕು ಅಣ್ಣಾ.
ಕೂರ್ಮನ ಶಿಶುವಿನ ಸ್ನೇಹದಂತೆ ಇರಲೊಲ್ಲದೆ
ಆರೂಢಗೆಟ್ಟೆಯೊ ಅಜಗಣ್ಣಾ.
1097.05 388
C77
ಮುಕ್ತಾಯಕ್ಕ ಅಜಗಣ್ಣಾ
ಆಕರ ಗ್ರಂಥಗಳು
ಮಹದೇವಯ್ಯನ ಶೂನ್ಯಸಂಪಾದನೆ 80
ರವಿಯೊಳಡಗಿದ ಪ್ರತಿಬಿಂಬದಂತೆ
ಹಿಡಿವರಿಗಳವಲ್ಲದಿರಬೇಕು ಅಣ್ಣಾ.
ನಿನ್ನೊಳಡಗಿದ ಭೇದವ ಭಿನ್ನವಮಾಡುವರೆ ಅಣ್ಣಾ?
ನಿನ್ನ ನುಡಿಯೆಲ್ಲ ಪ್ರತಿಬಿಂಬಗಳಾದವೆ ಅಣ್ಣಾ.
ಕೊಡನೊಳಗಣ ಜ್ಯೋತಿಯ ಅಡಗಿಸಲರಿಯದೆ
ಮಿಗೆವರಿದಂತಾದೆಯೊ ಅಜಗಣ್ಣಾ!
1125.05 389
C78
ಮುಕ್ತಾಯಕ್ಕ ಅಜಗಣ್ಣಾ
ಆಕರ ಗ್ರಂಥಗಳು
ಮಹದೇವಯ್ಯನ ಶೂನ್ಯಸಂಪಾದನೆ 81
ಅಂಗೈಯೊಳಗೊಂದು ಅರಳ್ದ ತಲೆಯ ಹಿಡಿದುಕೊಂಡು
ಕಂಗಳ ಮುತ್ತ ಪವಣಿಸುವಾಕೆ ನೀನಾರು ಹೇಳಾ?
ಸಂದ ಸಂಪಿಗೆಯರಳ ತುಂಬಿ ಬಂದುಂಬ ಭೇದವನರಿಯದೆ
ಹಂಬಲಿಸುವ ಪರಿತಾಪವೇನು ಹೇಳಾ?
ಒಂದೆಂಬೆನೆ ಎರಡಾಗಿದೆ ಎರಡೆಂಬೆನೆ ಒಂದಾಗಿದೆ
ಅರಿವಿನೊಳಗಣ ಮರಹಿದೇನು ಹೇಳಾ?
ದುಃಖವಿಲ್ಲದ ಅಕ್ಕೆ, ಅಕ್ಕೆಯಿಲ್ಲದ ಅನುತಾಪ
ನಮ್ಮ ಗುಹೇಶ್ವರಲಿಂಗದಲ್ಲಿ ತೋರುತ್ತಿದೆ.
ನೀನಾರೆಂದು ಹೇಳಾ ಎಲೆ ಅವ್ವಾ?
725.02 390
C79
ಅಲ್ಲಮ ಗುಹೇಶ್ವರ
ಆಕರ ಗ್ರಂಥಗಳು
ಮಹದೇವಯ್ಯನ ಶೂನ್ಯಸಂಪಾದನೆ 82

ಟಿಪ್ಪಣಿ; * ಪುಟ ಸಂಖ್ಯೆವಚನ ಸಂಖ್ಯೆ

[ಮೊದಲ ಪುಟ]  « ಹಿಂದಿನ 1031323334353637383940ಮುಂದಿನ 10 » [ಕೊನೆ ಪುಟ]


ಸಿಕ್ಕ ಪಲಿತಾಂಶಗಳು 427 ಇದು ಪುಟ 39 ಈ ಪುಟದಲ್ಲಿ ಪಲಿತಾಂಶಗಳು 381 ರಿಂದ 390 ವರೆಗೆ