ವಚನ ಆಕರಗಳು (15ನೆ ಶತಮಾನ)
ಆಹ್ವಾನಿಸುವಲ್ಲಿ ಪ್ರಾಣಲಿಂಗವಿಲ್ಲ, ವಿಸರ್ಜಿಸುವಲ್ಲಿ ಲಿಂಗವಂತರಿಸಿತ್ತು.
ಆಹ್ವಾನಿಸುವನಲ್ಲ, ವಿಸರ್ಜಿಸುವನಲ್ಲ, ಶರಣನ ಪರಿ ಬೇರೆ.
ಲಿಂಗಭೋಗೋಪಭೋಗವಲ್ಲದೆ, [ಅನರ್ಪಿತವ] ಭೋಗಿಸುವನಲ್ಲ.
ಆಗಲೂ ಪ್ರಾಣಲಿಂಗಸಂಗದಲ್ಲಿಯೆ ಇಪ್ಪನು.
ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣಂಗೆ
ನಮೋ ನಮೋ ಎಂಬೆ. |
431.03 |
211 A211 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಯ್ಯಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಆಹ್ವಾನಿಸುವಲ್ಲಿ ಪ್ರಸೂತಿಕಾಯ, ಸ್ವತಂತ್ರನೆಂತೆಂಬೆ ?
ವಿಸರ್ಜಿಸುವಲ್ಲಿ ಲಿಂಗಸಂತುಷ್ಟನೆಂತೆಂಬೆ ?
ಆಧಾರಾಧೇಯದ ಸುಳುಹಲ್ಲ, ಆಧಾರಾಧೇಯ[ದ] ಭಾವವಲ್ಲ.
ಬಿಂದು ಕ್ರೀಯನುಂಡು ಬಿಂದು ತಾನಾದುದು.
ಪ್ರಾಣಾಪಾನದ ಅನುವಿನ ಅನುಸಂಧಾನ[ದ] ಮನವು.
ಅಸಮಾನ ತಾಳೋಷ ಶಬ್ದಸಂಚಿತನಲ್ಲ,
ಉಭಯಪ್ರಸೂತಿ ವಿರಹಿತ
ಕೂಡಲಚೆನ್ನಸಂಗಾ ನಿಮ್ಮ ಶರಣ. |
475.03 |
212 A212 |
ಚೆನ್ನಬಸವಣ್ಣ | ಕೂಡಲಚೆನ್ನಸಂಗಾ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಜ್ಞಾನವೇ ಪ್ರಸಾದಕಾಯ ಜ್ಞೇಯವೇ ಚಿನ್ಮಯಲಿಂಗ,
ಜ್ಞಾನ ಜ್ಞೇಯ ಸಂಪುಟದಿಂದ
ಶರಣನೆನಿಸಿಕೊಂಡ ಜಂಗಮದ ಅಂತರಂಗದಲ್ಲಿಯೂ ನೀನೇ,
ಬಹಿರಂಗದಲ್ಲಿಯೂ ನೀನೇ,
ಎಂತು ನೋಡಿದಡೆ ಶರಣರ ಕಣ್ಣ ಮೊದಲಲ್ಲಿಯೂ ನೀನೇ
ಶಿವಜ್ಞಾನಸಂಪನ್ನನಾದ ಶರಣಂಗೆ
ಅಹ್ವಾನವಿಲ್ಲ , ವಿಸರ್ಜನೆ ಎಂಬುದಿಲ್ಲ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. |
1393.06 |
213 A213 |
ಉರಿಲಿಂಗಪೆದ್ದಿ | ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಅಷ್ಟತನುಮೂರ್ತಿ ಲಿಂಗವೆಂದೆಂಬರು ಕೇಳಿರಯ್ಯಾ:
ಆದಿಯ ಮಗ ಅತೀತ, ಅತೀತನ ಮಗ ಆಕಾಶ,
ಆಕಾಶನ ಮಗ ವಾಯು, ವಾಯುವಿನ ಮಗ ಅಗ್ನಿ,
ಅಗ್ನಿಯ ಮಗ ಅಪ್ಪು, ಅಪ್ಪುವಿನ ಮಗ ಪೃಥ್ವಿ,
ಪೃಥ್ವಿಯಿಂದ ಸಕಲ ಜನನವು.
ಮನಸಿನ ಮಗ ಚಂದ್ರ, ನಯನದ ಮಗ ಸೂರ್ಯ,
ದೇಹದ ಮಗನಾತ್ಮ,
ಇಂತೀ ಅಷ್ಟತನುವೆಲ್ಲಕ್ಕೆಯು ಉತ್ಪತ್ಯವುಂಟು.
ಉತ್ಪತ್ಯರಹಿತ ಅಯೋನಿಜ ಶೂನ್ಯನಿರಾಳ
ನಮ್ಮ ಕೂಡಲಸಂಗಮದೇವಂಗೆ ಮಾತಾಪಿತರಿಲ್ಲ. |
957.01 |
214 A214 |
ಬಸವಣ್ಣ | ಕೂಡಲಸಂಗಮದೇವ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಅಷ್ಟತನುಮೂರ್ತಿಯೆಂಬ ಮಾತಿನ ಪಾತಕವ ಕೇಳಲಾಗದು.
ಪೃಥ್ವಿಯಂತೆ ಕಠಿಣವುಳ್ಳಾತನೆ? ಅಪ್ಪುವಿನಂತೆ ಓಟ ಭರತವುಳ್ಳಾತನೆ?
ತೇಜದಂತೆ ತೃಣಕಾಷ*ವಿಲ್ಲದಿರೆ ನಂದುವಾತನೆ?
ವಾಯುವಿನಂತೆ ಚಲನೆವುಳ್ಳಾತನೆ? ಆಕಾಶದಂತೆ ಬಯಲಾದಾತನೆ?
ಸೋಮಸೂರ್ಯರಂತೆ ದಿವಾರಾತ್ರಿಯ ನಡೆಸುವಾತನೆ?
ಜೀವಾತ್ಮನಂತೆ ಜನನ ಮರಣವುಳ್ಳಾತನೆ?
ಇದು ಕಾರಣ ಕೂಡಲಚೆನ್ನಸಂಗಯ್ಯಾ ನೀ ನಿನ್ನಂತೆ
ಇವರೆಲ್ಲರೂ (ಇವೆಲ್ಲವೂ) ನೀನಿರಿಸಿದಂತೆ. |
191.03 |
215 A215 |
ಚೆನ್ನಬಸವಣ್ಣ | ಕೂಡಲಚೆನ್ನಸಂಗ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಪೃಥ್ವಿ ಲಿಂಗವೆಂದು ಗತವಾದರು ಹಲಬರು.
ಅಪ್ಪು ಲಿಂಗವೆಂದು ತಪ್ಪಿದರು ಶಿವಪಥವ ಹಲಬರು.
ತೇಜ ಲಿಂಗವೆಂದು ವಾದಿಗಳಾದರು ಹಲಬರು.
ವಾಯು ಲಿಂಗವೆಂದು ಘಾಸಿಯಾದರು ಹಲಬರು.
ಆಕಾಶ ಲಿಂಗವೆಂದು ಶೂನ್ಯವಾದಿಗಳಾದರು ಹಲಬರು.
ಇಂತೀ ಹುಸಿಶಬ್ಧವ ತೊಡೆದು,
ನಿಜಲಿಂಗ ನಿಜಜಂಗಮ ನಿತ್ಯಪ್ರಸಾದದ ನಿಜವ ತೋರಿ,
ಎನ್ನ ಬದುಕಿಸಿದಾತ ಬಸವಣ್ಣ ಕಾಣಾ, ಕಲಿದೇವಯ್ಯ |
671.08 |
216 A216 |
ಮಡಿವಾಳಮಾಚಿದೇವ | ಕಲಿದೇವ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಪಂಚಾಶತ್‍ಕೋಟಿ ವಿಸ್ತೀರ್ಣ ಭೂಮಂಡಲ
ಅಷ್ಟದಿಕ್ಕುಗಳೆಂಬವರೊಳಗಿಲ್ಲವಣ್ಣಾ.
ಗಗನಮಂಡಲದೊಳಗೆ ಬೆಳಗುವಷ
ರವಿಶಶಿಗಳುದಯದ ಬಳಿವಿಡಿದು ಸುಳಿವವರೊಳಗಲ್ಲ.
ಅಂತಿಂತಾಗದ ಮುನ್ನ ಇನ್ನೇನೂ ಇಲ್ಲ.
ಬೆಸಗೊಂಬಡೆ ಹೇಳುವೆ.
ನಿನ್ನ ವಶಕ್ಕೆ ಬಾರದು ಕೇಳು,
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿಲ್ಲ,
ಬರಿಮಾತೇನು?
|
642.07 |
217 A217 |
ಚಂದಿಮರಸ | ಸಿಮ್ಮಲಿಗೆಯ ಚೆನ್ನರಾಮ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಅಷ್ಟತನುಮೂರ್ತಿ ಶಿವನೆಂಬ ಕಷ್ಟಜೀವಿಗಳನೇನೆಂಬೆನಯ್ಯಾ?
ಯುಗಜುಗಂಗಳು ಪ್ರಳಯವಹಲ್ಲಿ ಧರೆ ಜಲದಲ್ಲಿ ಅಡಗಿತ್ತು,
ಜಲ ಅಗ್ನಿಯಲ್ಲಿ ಅಡಗಿತ್ತು, ಅಗ್ನಿ ವಾಯುವಿನಲ್ಲಿ ಅಡಗಿತ್ತು,
ವಾಯು ಆಕಾಶದಲ್ಲಿ ಅಡಗಿತ್ತು, ಆಕಾಶ ಅತೀತನಲ್ಲಿ ಅಡಗಿತ್ತು,
ಅತೀತ ಆದಿಯೊಳಗಡಗಿತ್ತು, ಆದಿ ಅನಾದಿಯೊಳಡಗಿತ್ತು,
ಅನಾದಿ ನಿಜದೊಳಡಗಿತ್ತು.
ಇಂತೀ ಅಷ್ಟತನು ಒಂದರೊಳಗೊಂದಳಿವಲ್ಲಿ, ಒಂದರೊಳಗೊಂದು ಹುಟ್ಟುವಲ್ಲಿ,
ಎಂದಳಿದನೆಂದು, ಹುಟ್ಟಿದನೆಂದು ಬಲ್ಲವರುಂಟೆ?
ಹುಟ್ಟಿದನಳಿದವನೆಂಬ ಶಬ್ದವ ನುಡಿಯಲಾಗದು.
ಇದು ಕಾರಣ,
ನಮ್ಮ ಮಹಾಘನ ಸೋಮೇಶ್ವರನು ಮಾಡಿದಡಾದವು,
ಬೇಡಾ ಎಂದಡೆ ಮಾದವು. |
300.06 |
218 A218 |
ಅಜಗಣ್ಣತಂದೆ | ಮಹಾಘನ ಸೋಮೇಶ್ವರ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
| ಹೊರಗೆಂಟು ತನು, ಒಳಗೆ ನಿರಂಜನ ಜ್ಯೋತಿ,
ತೆರಹಿಲ್ಲದಿಪ್ಪವನನಾ[ರೂ] ಬಲ್ಲವರಿಲ್ಲ ಕೇಳಿರೇ.
ಶಿವನಲ್ಲದೆ ಬೇರೆ ದೈವವಿಲ್ಲ.
ಹುಲಿಗೆರೆಯ ವರದ ಸೋಮನಾಥನು
ಏಕೋರುದ್ರನದ್ವಿತೀಯನೆಂದುದು ಶ್ರುತಿ. |
297.06 |
219 A219 |
ಅಗ್ಘವಣಿಹೊನ್ನಯ್ಯ | |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಸರ್ವವೂ ಶಿವನಿಂದ ಉದ್ಭವಿಸುವವೆಂದರೆ, ಉದ್ಭವಿಸುವವೆಲ್ಲವೂ ಶಿವನೆ?
ಸಕಲ ಬೀಜವ ಬಿತ್ತುವನೊಕ್ಕಲಿಗನೆಂದರೆ ಆ ಬೆಳೆ ತಾನೊಕ್ಕಲಿಗನೆ?
ಮಡಕೆಯ ಕುಂಬಾರ ಮಾಡುವನೆಂದರೆ, ಆ ಮಡಕೆ ತಾ ಕುಂಬಾರನೆ?
ಕಬ್ಬುನವ ಕಮ್ಮಾರ ಮಾಡುವನೆಂದರೆ, ಆ ಕಬ್ಬುನ ತಾ ಕಮ್ಮಾರನೆ?
ಆ ಪರಿಯಲಿ ಸಕಲ ಜಗತ್ತಿನ ಸಚರಾಚರವನು ಮಾಡುವನೆಂದರೆ,
ಆ ಸಚರಾಚರವು ಶಿವನೆ?
ಅಹಂಗಾದರೆ ಅಷ್ಟಾದಶವರ್ಣವೇಕಾದವು?
ಚೌರಾಸಿಲಕ್ಷ ಜೀವರಾಶಿಗಳೇಕಾದವು?
ಸುಖ-ದುಃಖ ಸ್ವರ್ಗ-ನರಕಂಗಳೇಕಾದವು?
ಉತ್ತಮ-ಮಧ್ಯಮ-ಕನಿಷ್ಠಂಗಳೇಕಾದವು?
ಪುಣ್ಯ-ಪಾಪ, ಭವಿ-ಭಕ್ತರೆಂದೇಕಾದವು?
ಇದು ಕಾರಣ ಸದಾಚಾರ ಸದ್ಭಕ್ತಿಯಲ್ಲಿಪ್ಪಾತನೆ ಶಿವ.
ಅಂತಲ್ಲದೆ ಸರ್ವವೂ ಶಿವನೆಂದರೆ
ಅಘೋರ ನರಕ ಕೂಡಲಚೆನ್ನಸಂಗಯ್ಯಾ. |
192.03 |
220 A220 |
ಚೆನ್ನಬಸವಣ್ಣ | ಕೂಡಲಚೆನ್ನಸಂಗ |
| ಆಕರ ಗ್ರಂಥಗಳು |
ಜಕ್ಕಣ್ಣನ ಏಕೋತ್ತರಶತಸ್ಥಲ
|
ಟಿಪ್ಪಣಿ; * ಪುಟ ಸಂಖ್ಯೆ ‖ ವಚನ ಸಂಖ್ಯೆ [ಮೊದಲ ಪುಟ] « ಹಿಂದಿನ 10 21 22 23 24 25 26 27 28 29 30 ಮುಂದಿನ 10 » [ಕೊನೆ ಪುಟ]
ಸಿಕ್ಕ ಪಲಿತಾಂಶಗಳು 427 ಇದು ಪುಟ 22 ಈ ಪುಟದಲ್ಲಿ ಪಲಿತಾಂಶಗಳು 211 ರಿಂದ 220 ವರೆಗೆ |
|
|